Saturday, September 13, 2014

ಮಕ್ಕಳ ಮನದ ಖುಷಿ - ದೇಹ ಸ್ಥಿತಿಕಳೆದ ವರ್ಷ ಪೋರ್ಟ್ಲ್ಯಾಂಡ್ ನಲ್ಲಿ ನಡೆದ "Integrative Medicine" ನ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಹಲವಾರು seminar ಗಳಿಗೆ ಕಿವಿಕೊಟ್ಟಿದ್ದೆ ಅದರಲ್ಲಿ, ಕಿವಿ ದಾಟಿ ತಲೆಯೋಳಗಿಳಿದಿದ್ದು ಕೆಲವಷ್ಟೇ ಆದರೆ ಒಂದು ಮಾತ್ರ, ಬುದ್ದಿಯನ್ನು ಮೀರಿ ಮನಸ್ಸಿನೊಳಗೆ ನಿಂತಿತು. 

ಅದು "Stress level in Children". 


ಅವರ ಸಂಶೋಧನೆಯ ವರದಿಯ ಪ್ರಕಾರ, ಹರೆಯದ ಭಾವನಾತ್ಮಕ ಬೇಗುದಿ ಮತ್ತು ವಯಸ್ಕರ ಸಾಮಾಜಿಕ ಮತ್ತು ಅರ್ಥಿಕ ಜವಾಬ್ದಾರಿಯಿಂದ ಉದ್ಭವಿಸೋ ಒತ್ತಡಗಳಿಗಿಂತ (stress). ಎಳೆ ವಯಸ್ಸಿನ ಮಕ್ಕಳ ಮನಸ್ಸಿನಲ್ಲಿ ಸಣ್ಣ ಸಣ್ಣ ಕಾರಣಗಳಿಂದಾಗಿ ಉಂಟಾಗೋ ಒತ್ತಡಗಳು ನಾಲ್ಕು ಪಟ್ಟು ಪ್ರಭಲವಾಗಿರುತ್ತವಂತೆ.

ಉದಾಹರಣೆಗೆ; ಅವರು ಕೇಳಿದ angry bird ಬ್ಯಾಗ್, ಬಲೂನ್, ಬಣ್ಣದ ಪೆನ್ಸಿಲ್, ನೀಲಿ ಕಾರ್, ಕೆಂಪು ಆಂಬುಲೆನ್ಸ್ ಆಟಿಕೆಗಳನ್ನು ನಾವು ತೆಗೆದು ಕೊಡಲು ನಿರಾಕರಿಸಿದಾಗ ಅಥವಾ ಬೇಡವೆಂದರೂ ಡೇ ಕೇರ್ ನಲ್ಲಿ ಬಿಟ್ಟು ಹೊರಟಾಗ ಉಂಟಾಗೋ ಅ ಕ್ಷಣದ ಆಘಾತ ಮನದೊಳಗೆ ಬೆಳೆದು, stress level ಹೆಚ್ಚಾಗಿ ಹಾರ್ಮೋನ್ ಗಳ ಸಲೀಲತೆ ದಾರಿತಪ್ಪಿ, ದಿನಗಳೆದಂತೆ  ಮಾನಸಿಕವಾಗಿ ಖಿನ್ನತೆ ಮೂಡಬಹುದು ಅಥವಾ ದೈಹಿಕ ಬೆಳವಣಿಗೆ ಕುಂಟಿತವಾಗಬಹುದು. 

ಹಾಗಾದರೆ ನಾವೆಲ್ಲಾ ಬೆಳೆದಿಲ್ಲವಾ.. ಹೌದು ನಾವೆಲ್ಲಾ ಅಂತಹ ಲಕ್ಸುರಿ ಯಿಂದ ವಂಚಿತರಾಗೆ ಬೆಳೆದಿದ್ದೇವೆ ಆದರೆ.. .... ನಾವು ನಾಲ್ಕು ಗೋಡೆಯ ಮಧ್ಯ ಬೆಳೆಯಲಿಲ್ಲಾ, ನಾವು ಒಂಟೊಂಟಿಯಾಗಿ TV, tablet ಗಳೆಂಬ ಏಕಮುಖಿ ಗೆಳೆಯರ ಜೊತೆ ಬೆಳೆಯಲಿಲ್ಲ. ನಮ್ಮ ಆ ಕ್ಷಣದ ಬೇಗುದಿಯನ್ನು ತಕ್ಷಣ ಮರೆಸುವ ಅಣ್ಣ, ತಂಗಿ, ತಾತ, ಅಜ್ಜಿ, ಪಕ್ಕದಮನೆಯ ರವಿ, ಮಹೇಶ, ಗೌರಿ, ಗಾಯತ್ರಿಯೊಂದಿಗೆ ಬೆಳೆದಿದ್ದೇವೆ. ಹಾಗಾಗಿ ನಮ್ಮಲಿ ಅಷ್ಟು ಪ್ರಭಲೋತ್ತಡಗಳಿರಲಿಲ್ಲ. 

ಕಳೆದ ಶುಕ್ರವಾರ ನನ್ನ ಮಗ ಸಂಜೆ ಬರುತ್ತಲೇ "ಅಪ್ಪ just 6 days left" ಅಂದಾಗ ನನಗೆ ಅರ್ಥವೇ ಅಗಲಿಲ್ಲಾ. ಏನೋ ಅದು 6 ದಿನ ಎಂದರೆ
"ಹಾಲೊವೀನ್ ಪರೇಡ್" ಎಂದು ಹೇಳಿ ಹಾರಿ ಹೋದ. 

ಮತ್ತೆ ಸೋಮವಾರ ಮರೆಯದೆ "3 days left" ಎಂದು ನನಗೆ ಮರುನೆನಪಿಸಿದ. 

ಸತತವಾಗಿ ಕಳೆದ ಎರಡು ವರುಷದಿಂದಲೂ ಸರಿಯಾಗಿ Halloween ದಿನವೆ ಹುಷಾರು ತಪ್ಪಿ ಶಾಲೆಗೆ ಹೋಗಲಾಗದೆ ಮಿಸ್ ಮಾಡಿಕೊಂಡಿದ್ದಾನೆ. ಈ ಸಾರಿ ಅವನು ಕೇಳಿದ ಡ್ರೆಸ್ ಕೋಡ್ ತೆಗೆದುಕೊಟ್ಟು ಹೊಸ ಶಾಲೆಯ ಮೊದಲನೇ ಪೆರೇಡ್ ಗೆ ಕಳುಹಿಸಬೇಕೆಂಬ ಹಂಬಲ ಅವನ ಅಮ್ಮನದು.

ವರುಷಕ್ಕೊಮೆ ಮಾತ್ರ ಹಾಕುವ ಡ್ರೆಸ್, ಪ್ರತಿ ವರುಷ ತಗೆದು ಕೊಡೋದಾ? ಕಳೆದ ವರ್ಷದ ಡ್ರೆಸ್ ಇದ್ದೆ ಇದೆಯಲ್ಲ ಅದನ್ನೇ ಹಾಕಿ ಕಳುಹಿಸಿದರಾಯ್ತು ಅಂತ ನಾನು. ನಮ್ಮಿಬ್ಬರ ನಡುವೆಯೇ ಇನ್ನೂ ಒಮ್ಮತ ಮೂಡಿರಲಿಲ್ಲ. ಅದೂ ಅಲ್ಲದೇ ನಾವು ಅವನನ್ನು ಯಾವ ಡ್ರೆಸ್ ಬೇಕೆಂದು ಕೇಳಿರಲಿಲ್ಲಾ. 

ಮೊನ್ನೆ ಬಂದವನೇ "2 days left, I want ಪೋಲಿಸ್ ಆಫೀಸರ್ ಡ್ರೆಸ್" ಅಂತ ಡಿಮ್ಯಾಂಡ್ ಮಾಡಿದ.
ಸಧ್ಯ ಕಳೆದ ವರುಷವೂ ಅದೇ ಡ್ರೆಸ್ ಕೇಳಿದ್ದರಿಂದ ನನಗೆ ನೆಮ್ಮದಿಯಾಯ್ತು, ಹೆಂಡತಿಯ ಮುಂದೆ ಒಂದು ವಿಜಯದ ನಗೆ ನಕ್ಕು, ಸರಿ ನಿನ್ನ ಫ್ರೆಂಡ್ಸ್ ಯಾವ್ಯಾವ ಡ್ರೆಸ್ ಹಾಕೋತ ಇದಾರೆ ಎಂದೇ. ಅಷ್ಟಕ್ಕೇ ಶುರುವಾಯ್ತು, ಜೋಸೆಫ್- ಐರನ್ ಮ್ಯಾನ್, ಜಾಕ್ವಲೀನ್- ಸಿಂಡ್ರೆಲಾ..... ೬-೭ ಜನರ ವಿವರಣೆ ಮುಗಿಸಿ, ತಾನು ಹೇಗೆ ಪೋಲಿಸ್ ಕ್ಯಾಪ್, ಬೆಲ್ಟ್ ಶೂ ಎಲ್ಲ ಹಾಕಿ ಕೊಳ್ಳುತ್ತಾನೆಂದು ಕೂಲಂಕುಶವಾಗಿ ವಿವರಿಸಿ ಮಲಗಿದ. 

ಮುಂಜಾನೆ ಏಳುತ್ತಿದ್ದಂತೆ ಮಗನಿಗೆ ಸಣ್ಣದಾಗಿ ಮೈ ಬಿಸಿಯೇರಿತ್ತು, ನನ್ನವಳಿಗೆ ಗಾಬರಿ,  ಅಯ್ಯೋ ಹಾಲೊವೀನ್ ಹತ್ತಿರ ಬರ್ತಾ ಇದೆ ಈ ವರುಷ ವೂ ಹುಷಾರು ತಪ್ಪುತ್ತಾನಾ..!! ಇಂದು ಶಾಲೆಗೇ ಕಳಿಸೋದು ಬೇಡ ಮನೆಯಲ್ಲೇ ರೆಸ್ಟ್ ತೆಗೆದು ಕೊಳ್ಳಲಿ ಎಂದಳು. 

ಆದರೆ ಅವನು ಮಾತ್ರ ಲವಲವಿಕೆಯಿಂದಲೇ ಸಿದ್ಧವಾಗಿದ್ದನು. ಇಷ್ಟಕ್ಕೆಲ್ಲ ಯ್ಯಾಕೆ ಸ್ಕೂಲ್ ತಪ್ಪಿಸೋದು, ಅದು ಅಲ್ಲದೆ ಸ್ಕೂಲ್ ತಪ್ಪಿಸಿದರೆ ನಮ್ಮಿಬ್ಬರಲ್ಲಿ ಯಾರಾದರೊಬ್ಬ ರಜ ಹಾಕಿ ಮನೆಯಲ್ಲೇ ಇರಬೇಕಾಗುತ್ತೆ ಅದೆಲ್ಲ ಹಿಂಸೆ ಯಾಕೆ ಸ್ಕೂಲ್ ಗೆ ಹೋಗಲಿ ಬಿಡು, ಮಕ್ಕಳ ಜೊತೆ ಬೆರೆತರೆ ಸರಿಯಾಗುತ್ತಾನೆ ಅಂತ ಸ್ಕೂಲ್ ಗೆ ಕಳಿಸಿದೆವು. 

ಅದೇ ನಾವು ಮಾಡಿದ ತಪ್ಪು!!    

ಸಂಜೆ ಬರುವಷ್ಟರಲ್ಲಿ ತುಂಬಾ ಬಳಲಿ, ಕಣ್ಣೆಲ್ಲ ಕೆಂಪಗಾಗಿ ಒಳಗಿಳಿದು ಹೋಗಿದ್ದವು. ಆ ಸಪ್ಪೆ ಮುಖದಲ್ಲೂ 1 day left ಎನ್ನುತ್ತಾ ಮಲಗಿ ಕೊಂಡನು. 

ಸರಿ ಮರು ದಿನ ಪೂರ್ತಿ ರೆಸ್ಟ್ ಕೊಟ್ಟು ಗುರುವಾರದ ವರೆಗೆ ರೆಡಿ ಮಾಡುವ ಹೊಣೆ ಹೊತ್ತು ಅವನಮ್ಮ ಮನೆಯಲ್ಲೇ ಉಳಿದಳು. ಅಂತೆಯೇ ಸಂಜೆವರೆಗೆ ಸ್ವಲ್ಪ ಹರುಷವಾದನು ಸಹ. 
0 day left for parade ಎನ್ನುತ್ತಾ ಎಂಟು ಗಂಟೆಗೆ ಬೆಡ್ ಮೇಲೆ ಬಂದವನಿಗೆ ೧೧ ಗಂಟೆಯಷ್ಟೊತ್ತಿಗೆ ಮೈಯ ಬಿಸಿ ೧೦೩ ದಾಟಿತ್ತು.  ಟೈಲಿನೋಲ್, ಐಬುಪ್ರೋಫಿನ್ ಮತ್ತು ತಲೆಯ ಮೇಲೆ ಒದ್ದೆ ಬಟ್ಟೆ ಇಟ್ಟು ರಾತ್ರಿಯಲ್ಲ ನಿದ್ದೆಗೆಟ್ಟು ಕಾಯುತ್ತ ಕುಳಿತಳು ಅವನಮ್ಮ. ಹೇಗಾದರೂ ನಾಳೆ ಬೆಳಿಗ್ಗೆ ಒಂಭತ್ತರ ಹೊತ್ತಿಗೆ ಅವನ ಟೆಂಪರೇಚರ್ ನಾರ್ಮಲ್ಗೆ ತಂದು. at least ಅರ್ದ ಗಂಟೆ ಪೆರೇಡ್ ಗೆ ಹೋಗುವಷ್ಟು ಹರುಶವಾದರು ಸಾಕೆಂದು ಬೇಡಿಕೊಳ್ಳುತ್ತ ಮಲಗಿದಳು.

ಮುಂಜಾನೆವರೆಗೆ  ಅವನ ಮೈಬಿಸಿ ತಹಬದಿಗೆ ಬಂದಿತ್ತು. ಆದರೆ ರಾತ್ರಿಯೆಲ್ಲ ಒದ್ದಾಡಿ ಊಟವನ್ನು ಮಾಡದೆ ಮಲಗಿದ್ದರಿಂದ ತುಂಬಾ ಸೊರಗಿ ಹೊಗಿದ್ದಾ, ಅಷ್ಟಿದ್ದರೂ ಬೆಳಿಗ್ಗೆ ತಾನಾಗೆ ಸ್ನಾನದ ಮನೆಗೆ ಹೋಗಿ, ಸ್ನಾನಕ್ಕೆ ರೆಡಿಯಾದ. ನಂತರ ಪೋಲಿಸ್ ಡ್ರೆಸ್ ಹಾಕಿಕೊಂಡು ನಡುಗುತ್ತಾ ಕ್ಷೀಣ ದ್ವನಿಯಲ್ಲಿ "lets go school" ಎಂದು ನಿಂತ. ಆದರೆ ನಿಲ್ಲಲು ತ್ರಾಣವಿಲ್ಲದೆ ಒದ್ದಾಡುತ್ತಿದ್ದಾ ಅವನನ್ನು ಹೇಗೆ ಕರೆದೊಯ್ಯುವುದು ?

ಅವನ ಪೆರೇಡ್ ಒಂಭತ್ತು ಮೂವತ್ತಕ್ಕೆ, ಹೊರಗೆ ಕೊರೆಯುವ ಚಳಿ ಬೇರೆ, ಈ ಚಳಿಯಲ್ಲಿ ಅವನನ್ನು ಸ್ಕೂಲ್ ಗೆ ಕರೆದುಕೊಂಡು ಹೋಗೋದು ಎಷ್ಟು ಸರಿ. ಜ್ವರ ಮತ್ತೆ ಉಲ್ಬಣ ವಾದರೆ ಏನು ಮಾಡೋದು.

ಅಷ್ಟು ದಿನದಿಂದ ಆಸೆ ಪಟ್ಟ ಆ ಕೋರಿಕೆಯನ್ನು ಪೂರೈಸೋದಾ ಅಥವಾ ದೆಹಾರೋಗ್ಯದ ಕಡೆ ಗಮನ ಹರಿಸಿ ಮನೆಯಲ್ಲೇ ಇರಿಸಿಕೊಳೋದಾ ದ್ವಂದ್ವ ಶುರುವಾಗಿ ಸುಮ್ಮನೆ ಕುಳಿತೆ. 

-                                                                                                                                                     - ಮಾನಸ 

Wednesday, August 28, 2013

ಅನಿ-ಸಿದ್ದು: ಒಂದೊಂದು ಕಲ್ಲು ಹಿಡಿದಿದ್ದರೆ ಸಾಕಿತ್ತು!!!

ಅನಿ-ಸಿದ್ದು: ಒಂದೊಂದು ಕಲ್ಲು ಹಿಡಿದಿದ್ದರೆ ಸಾಕಿತ್ತು!!!

hello

Sunday, August 25, 2013

ಝರಿ ಲಂಗದುಡುಗಿಗಾಗಿ ಹರಕೆ !!

ಸಾವಿರದ ಒಂಭೈನೂರ ಎಂಭತ್ತೇಳು, ೫ ನೆ ತರಗತಿಯ ವಿಜ್ಞಾನ ಪಿರಿಯಡ್ ನಲ್ಲಿ ನಾಗರತ್ನಮ್ಮ ಟೀಚರ್ ನಮ್ಮ ಹೋಂವರ್ಕ್ ಚೆಕ್ ಮಾಡ್ತಾ ಇದ್ದು, ಇದ್ದಕ್ಕಿದ್ದಂತೆ ತಲೆ ಎತ್ತಿ "ಯಾರದೋ ಈ ನೀಟ್ ಬುಕ್, ಹೋಂವರ್ಕ್ ಗೆ ಬೇರೆ ಬುಕ್ ಇಡಬೇಕು ಅಂತ ಗೊತ್ತಿಲ್ವಾ," ಅದನ್ನು ಕೇಳಿ ಮೆಲ್ಲಗೆ ಎದ್ದು ನಿಂತೆ, ಹೋಂ ವರ್ಕ್ ಗೆಲ್ಲ ಸಪರೇಟ್ ನೋಟ್ ಬುಕ್ ಇಡೋವಷ್ಟು ಪಾಪಿ ನಾನಂತೂ ಅಲ್ಲ. 

ಏನ್ ನಿನ್ ಹೆಸರು?
"ಸಿ.... " 
ನೀನಲ್ಲ ಅವ್ನು
"ಅವ್ನಾ... ಅದ್ಯಾರು ಮತ್ತೊಬ್ಬ ಪುಣ್ಯವಂತ ಎಂದು ಹಿಂತಿರುಗಿದರೆ, ಬರೋಬ್ಬರಿ 12 ಹುಡುಗರು 4 ಹುಡುಗಿಯರು ನಿಂತಿದ್ದರು. ಓಹೋ ಪರವಾಗಿಲ್ಲವೇ ಮನಸ್ಸಿಗೆ ಮಹದಾನಂದವಾಯ್ತು, ಏಟು ನನಗಷ್ಟೇ ಅಲ್ಲ ಎಲ್ಲರಿಗು ಬೀಳುತ್ತೆ. ಅಷ್ಟು ಜನರನ್ನು ನೋಡಿ ಏನೂ ಮಾಡಲು ತೋಚದೆ "ಸರಿ ಕುತ್ಕೊಳಿ" ಎಂದು ಸುಮ್ಮನಾದರು ಮಿಸ್ಸು. ಮತ್ತೆ ಅರ್ದ ಗಂಟೆ ಮೌನ, ಬೆಲ್ ಹೊಡೆಯಿತು ಕ್ಲಾಸ್ ಮುಗಿದು ಹೊರಗೆ ಹೋಗಲು ನಿಂತ ಮಿಸ್ ಹಿಂತಿರುಗಿ ಬಂದರು, ನನ್ನ ಪಾಡಿಗೆ ಸುಮ್ಮನೆ ಮುಗುಮ್ಮಾಗಿ ಕುಳಿತಿದ್ದಾ ನನ್ನನ್ನು ಎಲ್ಲರ ಮುಂದೆ ಎದ್ದು ನಿಲ್ಲಿಸಿ  
"ನಿನ್ನ ಹ್ಯಾಂಡ್ ರೈಟಿಂಗ್ ಚೆನ್ನಾಗಿದೆ ನೀನೆ ಕ್ಲಾಸ್ ಲೀಡರ್ ಆಗು, ದಿನ ದಿನಾಂಕ ಚೇಂಜ್ ಮಾಡಿ ಬೋರ್ಡ್ ಕ್ಲೀನ್ ಆಗಿ ಇಟ್ಕೊಬೇಕು" ಅಂದು ಹೊರಟೆ ಬಿಟ್ಟರು.
ಪರಮಾಶ್ಚರ್ಯದೊಂದಿಗೆ ಗಾಬರಿಗೊಂಡು  'ಹೂಂ' ಮತ್ತು 'ಉಹೂಂ' ನಡುವೆ ತಲೆಯಲ್ಲಾಡಿಸಿ ಕುಳಿತುಬಿಟ್ಟಿದ್ದೆ. ಸ್ವರ್ಗಕ್ಕೆ ಮೂರೇ ಗೇಣು. 


..........
 
ಲೀಡರ್ ಆಗಿ ಒಂದು ವಾರವಾದರೂ ತುಂಬಾ ಮೊದ್ದು ಮೊದ್ದಾದ (ಮುದ್ದು ಮುದ್ದಲ್ಲಾ !!) ನನ್ನ ನಿರಪಾಯಕಾರಿ ಮುಖ ನೋಡಿ ಹುಡುಗರು ನನ್ನನ್ನು ಲೀಡರ್ ಅಂತ ಒಪ್ಪಿಕೊಳ್ಳಲೇ ಇಲ್ಲ. ದಿನಾ ಗಲಾಟೆ, ಹರಟೆ ಜೋರಾಗುತ್ತಲೇ ಇದ್ದವು. ಎರಡು ವಾರ ನೋಡಿ ಈಗ ಹುಡುಗಿಯರು ಗಲಾಟೆ ಶುರು ಮಾಡಿಕೊಂಡರು. ಅವರಿಗೆ ಗೊತ್ತಿತ್ತು ನಾನು ಗದರಲಾರೆ ಹಾಗೆಯೇ ಟೀಚರ್ ಗೆ ಕಂಪ್ಲೇಂಟ್ ಕೊಡೋಷ್ಟು ದ್ರಾಸ್ಟತನವು ಇಲ್ಲವೆಂದು.  
ಅಂದು ಕೊನೆಯ ಬೆಂಚಲ್ಲಿ ಅದಾವಳೋ "ಕಿರಿಚಬೇಡವೇ ಲೀಡರು ಹೆಸ್ರು ಬರ್ಕೊಂಡ್ಬಿಡ್ತಾನೆ ಆಮೇಲೆ ಮಿಸ್ ಹತ್ರ ಎಟ್ ತಿನ್ಬೇಕಾಗುತ್ತೆ" ಅಂದಳು. ಪರ್ವಾಗಿಲ್ವೆ ಹುಡುಗಿರಾದ್ರು ಹೆದರಿಕೊಳ್ತಾರಲ್ಲಾ ಅಂತ ಖುಷಿಯಾಯ್ತು ಆದರೆ ಆ ಖುಷಿ ಅರೆ ಕ್ಷಣವೂ ಇರಲಿಲ್ಲಾ. ಅವನ್ಯಾವ್ ಸೀಮೆ ಲೀಡರ್ರೇ, ಸರಿಯಾಗಿ ತಲೇನೆ ಮೇಲಕ್ಕೆತ್ತೊಲ್ಲಾ...  ಬರ್ಕೊಳ್ಳಿ ಬಿಡೆ ನಂಗೇನ್ ಹೆದ್ರಿಕೆಯಿಲ್ಲಾ.

ಆಅ... ಅಕಟಕಟಾ ... "ನಂಗೇನ್ ಹೆದರಿಕೆಯಿಲ್ಲ.." ಆ ಪದ ಕೇಳಿ ಉರಿದೋಯ್ತು, ನಾನು !! ಈ ತರಗತಿಯ ಲೀಡರ್, ಹುಡುಗರು ಬೇಡ, ಹುಡುಗಿಯರೂ ನನಗೆ ಬೆಲೆ ಕೊಡುತ್ತಿಲ್ಲಾ ಅಂದರೇನು.??. ಎದೆ ಬಡಿತ ಜೋರಾಗಿ, ಸಹನೆಯ ಕಟ್ಟೆ ಹೊಡೆದು ಆಗ ಹುಟ್ಟಿತು ಮೊದಲ ego. ಮಾಡ್ತೀನಿ ಇರಿ ಮಕ್ಕಳಾ.... ಈಗಲೇ ಹೋಗಿ ಮಿಸ್ ಗೆ ಕಂಪ್ಲೇಂಟ್ ಮಾಡಲೇ ಎನಿಸಿಬಿಟ್ಟಿತು. ಅದ್ಹೇಗೋ ತಡೆದುಕೊಂಡು ಕುಳಿತೆ. ಅದೂ ಅಲ್ಲದೆ ಮೊತ್ತ ಮೊದಲು ಹುಡುಗಿಯರ ಮೇಲೆ ಕಂಪ್ಲೇಂಟ್ ಕೊಡೋದು ಬೇಡ ಅನ್ನಿಸಿ ಸುಮ್ಮನಾದೆ. ನಾಳೆ ಖಂಡಿತ ಯಾರು ಮೊದಲು ಮಾತಾಡ್ತಾರೋ ಅವರ ಹೆಸರನ್ನು ಬರೆಯಲೇ ಬೇಕು ಅಂತ ನಿರ್ಧರಿಸಿ ಮನೆಗೆ ಬಂದೆ. 

ಮಾರನೆ ದಿನ ಪ್ರೇಯರ್ ಮುಗಿಸಿ ಎಲ್ಲರು ಶಾಲೆ ಒಳಗೆ ಬಂದು ಗುಸು ಗುಸು ಶುರು ಮಾಡಿದರು. ಟೀಚರ್ ಇಲ್ಲದಿದ್ದಾಗ ಗುಸು ಗುಸು allowed ಇತ್ತು, ಜೋರಾಗಿ ಮಾತಾಡಬಾರದಷ್ಟೇ. ಪಿಸು ಸದ್ದಿನ ನಡುವೆ ಗುಡುಗಿನಂತೆ ಸೀಳಿ ಬಂತೊಂದು ದನಿ "ಯಾಕೆ ಮೈ ನೆಟ್ಗಿಲ್ವಾ, ಇನ್ನೊಂದ್ಸಾರಿ ಜಡೆ ಮುಟ್ಟಿದ್ರೆ ಭೂತ ಬಿಡಿಸ್ಬಿಡ್ತೀನಿ" ಪಕ್ಕದ ಕ್ಲಾಸ್ ಗು ಕೆಳಿಸೋಷ್ಟು ಜೋರು ದನಿ. ಇನ್ನು ವಿಧಿಯಿಲ್ಲಾ ಬರೆಯಲೇಬೇಕು. ಹೆಸರು ಬರೆಯಲು ಬೋರ್ಡ್ ಕಡೆ ತಿರುಗಿದೆ...ಆದ್ರೆ ಹೆಸರೇನು?. 

"ಏಯ್ ಏನ್ ನಿನ್ ಹೆಸರು?" ಆಗಷ್ಟೇ ಹುಡುಗರಿಗಷ್ಟೇ ಸೀಮಿತವಾಗಿದ್ದ ೪ನೇ ತರಗತಿಯಿಂದ ಬಂದಿದ್ದ ನಮಗೆ ಹುಡುಗಿಯರ ಜೊತೆ ಹೇಗೆ ವ್ಯವಹರಿಸಬೇಕೆಂದೇ ತಿಳಿದಿರಲಿಲ್ಲಾ, ಹಾಗಾಗಿ "ಏಯ್" ಅನ್ನೋ ಸಂಭೋಧನೆ ತುಂಬಾ ಸೇಫ್ ಎನಿಸುತ್ತಿತ್ತು. ನನ್ನ ಪ್ರಶ್ನೆಗೆ ಅವಳು ಉತ್ತರಿಸಲಿಲ್ಲವಾದರೂ ಇಡೀ ಹುಡುಗಿಯರ ಗುಂಪು ಒಕ್ಕೋರಲಿನಿಂದ ಕಿರುಚಿತು 

"ಭ_ _ _ _" ಒಹ್ ಇಷ್ಟೊಂದು ಒಗ್ಗಟ್ಟಿನಿಂದ ಎಲ್ಲರು ಹೇಳುತ್ತಿದ್ದಾರೆಂದರೆ ಇವಳು ಮಹಾನ್ ಕೊಬ್ಬಿನವಳೇ ಇರಬೇಕು ಎಂದೆನಿಸಿ ಬೋರ್ಡ್ ಕಡೆ ತಿರುಗಿದೆ. 
ಇಷ್ಟು ದಿನಕ್ಕೆ ಮೊತ್ತ ಮೊದಲ ಹೆಸರು ಬೋರ್ಡ್ ಮೇಲೆ ರಾರಾಜಿಸಿತು. ಒಬ್ಬ ಹುಡುಗಿಯ ಹೆಸರನ್ನು ನನ್ನ ಕೈಯಾರೆ ಬರೆದಿದ್ದು ಅದೇ ಪ್ರಥಮ (ಇಂದಿಗೂ ಬೇಸರವೆಂದರೆ....  ನನ್ನಜೀವನದ ಮೊದಲ ಹುಡುಗಿಯ ಹೆಸರನ್ನು ಅಷ್ಟು ಗುಂಡಾಗಿ ಎಲ್ಲರೆದುರು ಬೋರ್ಡ್ ಮೇಲೆ ಬರೆದಿದ್ದು).  
ಹತ್ತು ನಿಮಿಷ ರಗಳೆಗಳ ನಂತರ ಮಿಸ್ ಬಂದರು, ಅದೂ.....  ಗಣಿತ ಮಿಸ್. ಮಿಸ್ ನೋಡಿ ಎಲ್ಲರಿಗೂ ಆಶ್ಚರ್ಯದೊಂದಿಗೆ ಗಾಬರಿ ಆವರಿಸತೊಡಗಿತು. "ನಿಮ್ಮ ಕ್ಲಾಸ್ ಟೀಚರ್ ರಜ ಇವತ್ತು". ನನಗೋ  ಭಾರಿ ಆತಂಕ ಶುರುವಾಯ್ತು, ಅಷ್ಟು ದಿನ ಸುಮ್ಮನಿದ್ದು ಇವತ್ತೇ ಹೆಸರು ಬರೆಯಬೇಕೇ. ನಮ್ಮ ಕ್ಲಾಸ್ ಟೀಚರ್ ಆಗಿದ್ದರೆ ಬರಿ ಬೈಗುಳಕ್ಕೆ ಸೀಮಿತವಾಗುತ್ತಿದ್ದ ಘಟನೆ ಈಗ ಬೆತ್ತದವರೆಗೆ ತಲುಪಿತ್ತು. ಆ ಹುಡುಗಿಯ ಮುಖ ಆಗಲೇ ಬಿಳುಚಿತ್ತು, ಧುಮ್ಮಿಕ್ಕಲು ಅಣಿಯಾಗಿರುವ ತುಂಗೆ-ಭದ್ರೆಯರನ್ನು ಕಣ್ಣ ಅಂಚಲ್ಲೇ ತಡೆದು ನಿಲ್ಲಿಸಿ ಕಣ್ಣು ಮುಚ್ಚಿ ಕೈ ಒಡ್ಡಿದಳು. ಬಿಳಿ ಬಲ ಅಂಗೈಯ ಮೇಲೆ ಬೆತ್ತದ ಕೆಂಪು ಗೆರೆ ಮೂಡಲು ೨ ಬಳೆಗಳು ಕೋಪಗೊಂಡು ಚದುರಿ ಬಿದ್ದವು. ಝರಿ ಲಂಗದ ಅಂಚಿನಿಂದ ಕಣ್ಣೊರೆಸಿಕೊಂಡು ಬಿಕ್ಕಳಿಸುತ್ತಾ ತಲೆ ಬಗ್ಗಿಸಿ ಕುಳಿತಳು ಝರಿ ಲಂಗದುಡುಗಿ. ಈ ಘಟನೆಯ ನಂತರ ಬಾಕಿ ಹುಡುಗರು ಬಗ್ಗಿದರು. ನನ್ನೆಡೆಗೆ ಅಸಡ್ಡೆ ತೋರಿಸುತ್ತಿದ್ದಾ ಹುಡುಗ/ಹುಡುಗಿಯರು ಈಗ ಭಯ ಪಡತೊಡಗಿದರು. ನನಗೆ ನನ್ನ ಅಧಿಕಾರ ವಾಪಸ್ ಸಿಕ್ಕಿತ್ತು. ಆದರೆ ಆ ತರಗತಿಯ ಏಕೈಕ ಝರಿ ಲಂಗದುಡುಗಿ ಕಣ್ಣಲ್ಲಿ ನನ್ನೆಡೆಗಿನ ಸಿಟ್ಟು ಹೆಚ್ಚಿತ್ತು. 

ಏನೂ ಭಾವವಿಲ್ಲದಿರುವುದಕ್ಕಿಂತ ಒಂದು ಹುಡುಗಿಗೆ ನಮ್ಮ ಮೇಲೆ ಒಂದು ಸಿಟ್ಟಾದರು ಇರೋದು ಅದೆಷ್ಟು ಮಹತ್ವವೆಂಬುದು ಒಂದು ವರುಷದ ನಂತರ ತಿಳಿಯಿತು.
ಒಂದು ವರುಷದ ನಂತರ ೧೯೮೮ರಲ್ಲಿ ನಾ ನವೊದಯಕ್ಕೆ ಆಯ್ಕೆಯಾಗಿ ಶಾಲೆ ಬಿಟ್ಟು ಹೊರಟು ನಿಂತಾಗ, ಅಂದು ಸಿಟ್ಟಿನಲ್ಲಿ ಕೆಂಪಾಗಿದ್ದ ಕಣ್ಣುಗಳೇ ಮತ್ತೆ ಕೆಂಪಾಗಿ ಹನಿಗೈದಿದ್ದವು !!


ಸಿಟ್ಟಿನ ಕೆಂಗಣ್ಣುಗಳಲಿ, ಅಪ್ಯಾಯಮಾನತೆ ಮೂಡಿದ್ದು...  ಅದು ಮತ್ತೊಂದು ನೀಳ್ಗತೆ.. ಬಿಡುವಿದ್ದರೆ ಮುಂದಿನ ಭಾಗದಲ್ಲಿ..!!                                                                     ಭಾಗ ೨

ನನ್ನ ಅಹಂನಿಂದ ಅನ್ಯಾಯವಾಗಿ ಆ ಝರಿ ಲಂಗದುಡುಗಿ ಕಣ್ಣಲ್ಲಿ ನೀರು ಬರಿಸಿದ್ದು ಆ ದಿನದ ಅಕ್ಷಮ್ಯ ಅಪರಾಧವಾಗಿತ್ತು!!

ಮನಸ್ಸಿಗೆ ಅದೆಷ್ಟು ಬೇಸರ ವಾಗಿತ್ತೆಂದರೆ ಸಂಜೆ ಶಾಲೆಯಿಂದ ವಾಪಾಸ್ ಬರುವಾಗ, ದಾರಿ ಮಧ್ಯ ಬಂಡಿ ಬೀದಿಯೆದುರು ಅಂಟಿಸಿರುತ್ತಿದ್ದ ವಿಷ್ಣುವರ್ಧನ್ ಪೋಸ್ಟರ್ ಮತ್ತು ತಪ್ಪಿಯೂ ತಪ್ಪಿಸುತ್ತಿರದ ಆ ದೇವಸ್ಥಾನದ ಬದಿಯ ಅಶೋಕಣ್ಣನ ಸೈಕಲ್ ಶಾಪ್ ತಲೆಯ ಮೇಲೆ ಕಟ್ಟಿರುತ್ತಿದ್ದಾ ಕಲರ್ ಪಿಕ್ಚರ್ ಕಾಪಿ ಕೂಡ ನೋಡಲು ಮನಸ್ಸೋಪ್ಪಲಿಲ್ಲ. 

ಹಾಗೆ ಕಾಲೆಳುಯುತ್ತಾ ಆ ಹಳೆ ಕಾಲದ ತೇರಿನ ಎರಡು ಕಲ್ಲಿನ ಚಕ್ರದ ಮೇಲೆ ಹತ್ತಿ ಇಳಿದು ಉಯ್ಯಾಲೆ ಮಂಟಪಕ್ಕೆ ಬಂದಾಗ ಅದೇನೋ ಬಲಗಡೆ ತಿರುಗಿದೆ, ತಿಬ್ಬಾದೇವಿ ದೇವಸ್ಥಾನದ ಮುಖ್ಯ ದ್ವಾರ ಮತ್ತು ಗರ್ಭಗುಡಿ ಪೂರ ತೆರೆದಿತ್ತು. ಬೇಸರದ ಮನಕ್ಕೆ ಸಾಂತ್ವಾನ ನೀಡಲು ದೇವಿಯೇ ಆಹ್ವಾನ ನೀಡಿದಂತಿತ್ತು. 

ಒಳಹೋಗಿ ಒಂದೆರಡು ನಿಮಿಷ ಆ ಆನೆ ಕಲ್ಲಿನ ಮೇಲೆ ಕುಳಿತೆ. 

ಕಣ್ಣೆದುರು ದೇವಿಯ ಪಾದ ಇರುವ ಕಪ್ಪುಕಲ್ಲು. 


ಕರ್ಪೂರ ಉರಿದುರಿದು ಕಪ್ಪಾದ ಕಲ್ಲು ಅದರ ಮೇಲೆ ಬೊಗಸೆಯಷ್ಟು ಚೆಲ್ಲಿದ ಕುಂಕುಮದ ಮದ್ಯೆ ಎರಡು ಪುಟ್ಟ ಕಾಲಿನ ಪಾದದ ಅಚ್ಚೆ. ಅದೇನೋ ಆ ಕಪ್ಪು ಕಲ್ಲಿನ ಪಾದ ನೋಡಿದೊಡನೆ ಮತ್ತೆ ಆ ಹುಡುಗಿಯ ಬಿಳಿಯ ಕೈಗಳು ನೆನಪಾಗಿಬಿಟ್ಟಿತು, ನೇರ ದೇವರಿಗೆ ಅಪಮಾನ ಮಾಡಿಬಿಟ್ಟೆನೇನೋ ಎನ್ನುವಷ್ಟು ಭಯವಾಗತೊಡಗಿತು.

ಇನ್ನು ಯಾವ ಹುಡುಗಿಯ ಹೆಸರನ್ನೂ ಬೋರ್ಡ್ ಮೇಲೆ ಬರೆಯೋಲ್ಲವೆಂದು ತಪ್ಪೊಪ್ಪಿಗೆ ನೀಡಿ ಒಂದು ಧೀರ್ಘ ದಂಡ ನಮಸ್ಕಾರ ಮಾಡಿಬಿಡಬೇಕು ಎನ್ನುವಷ್ಟರಲ್ಲಿ ಮನದಲ್ಲೇನೋ ಹೊಸ ಬಯಕೆ ಹಾರಾಡತೊಡಗಿತು.


!! ಒಂದು ಹರಕೆ ಹೊತ್ತು ಬಿಟ್ಟರೆ ಅಂತಾ..!! 

ಸಾಮಾನ್ಯವಾಗಿ ನಮ್ಮೂರಿನ ಅನೇಕರು ತಾವಂದುಕೊಂಡ ಕೆಲಸ ಆಗುತ್ತೋ ಇಲ್ಲವೋ ಎಂದು ಮೊದಲೇ ಪರೀಕ್ಷಿಸಿಕೊಳ್ಳಲು ಈ ಕಲ್ಲ ಮುಂದೆ ಬಂದು ನಿಲ್ಲುತ್ತಿರುತ್ತಾರೆ. ತಾಯಿಯ ಪಾದವನ್ನು ಹೊತ್ತಿರೋ ಆ ದುಂಡಾದ ಕಪ್ಪುಕಲ್ಲಿನ ಮೇಲೆ ತಮ್ಮ ಎರಡು ಹಸ್ತಗಳನ್ನು ಒತ್ತಿ ಊರಿ ಎರಡು ಹೆಬ್ಬೆರಳುಗಳನ್ನು ಒಂದಕ್ಕೊಂದು ಸ್ಪರ್ಶಿಸಿ ಹಿಡಿದು ತಮ್ಮ ಇಷ್ಟಾರ್ಥಗಳನು ನೆನೆಸಿಕೊಂಡು ಕಣ್ಮುಚ್ಚಿದರೆ, ಒಂದರೆಗಳಿಗೆ ನಂತರ ಕೈಗಳು ತಂತಾನೇ ದೂರ ಸರಿದರೆ ತಮ್ಮಿಷ್ಟ ನೆರವೆರಿದಂತೆ.

ನೆನ್ನೆ ತಾನೇ ಎಣ್ಣೆ ತುಪ್ಪ ಹಾಕಿ ಅಭಿಷಕ್ತವಾಗಿದ್ದ ಆ ಕಲ್ಲು ಪರೀಕ್ಷೆಗಾಗಿ ಕರೆಯುತ್ತಿರುವಂತಿತ್ತು, ಸರಿ ಪರೀಕ್ಷಿಯೇ ಬಿಡೋಣ ಅಂತ ಆ ಕಲ್ಲಿನ ಮೇಲೆ ನನ್ನೆರಡು ಹಸ್ತ ಊರಿ ಕಣ್ಮುಚ್ಚಿದೆ. ಅದೆನಾಶ್ಚರ್ಯ, ಕಲ್ಲಿನ ಮೇಲೆ ನಾ ಕೈ ಇಟ್ಟ ಮರುಕ್ಷಣವೇ ಜಾರಿಕೊಂಡಿತು.
ನಾ ಬೇಡಿಕೊಂಡಿದ್ದಾದರೂ ಏನು, ಅದೊಂದು ಅಸಾಧ್ಯ ಬೇಡಿಕೆ.

ಬೇಡಿಕೆ ನಂಬರ್ ಒಂದು - ಆ ಝರಿ ಲಂಗದುಡುಗಿ ತಾ ಏಟು ತಿಂದ ಘಟನೆಯನ್ನು ಮರೆತು ಅವಳಾಗೇ ಬಂದು ನನ್ನನ್ನು ಮಾತನಾಡಿಸಬೇಕು

ಬೇಡಿಕೆ ನಂಬರ್ ೨- ಹಾಗೆ ಮಾತಾಡಿಸುವ ದಿನ ಝರಿಲಂಗ ಉಟ್ಟು ಎರಡು ಜಡೆ ಹಾಕಿಕೊಂಡಿರಬೇಕು.


ಅದು ಬೇಡಿಕೆಯ ಅಥವಾ ಆಜ್ಞೆಯ ಅಂದು ಗೊತ್ತಾಗಲಿಲ್ಲಾ. ಮೊದಲನೇ ಬೇಡಿಕೆನೆ ಜಾಸ್ತಿಯಾಗಿತ್ತು, ಬರಿ ಮಾತಾಡಿಸುವುದಕ್ಕಷ್ಟೇ ಸೀಮಿತವಾಗಿದ್ದರೆ ಸಾಕಿತ್ತು, ಝರಿ ಲಂಗ, ಎರಡು ಜಡೆ ಎಲ್ಲ ಯಾಕೆ ಬೇಕಿತ್ತೋ ಕಾಣೆ. ಆದರು ಹರಕೆ ಒಪ್ಪಿಕೊಂಡಾಗಿದೆ ಇನ್ನು ಆ ಹುಡುಗಿಗಿಂತ ತಿಬ್ಬಾದೇವಿಯ ಮಹಿಮೆಯನ್ನು ಕಾಡು ನೋಡಬೇಕಿತ್ತು. 

ಆದರು ಆ ಕ್ಷಣ ಮನ ಶಾಂತವಾಗಿತ್ತು, ಮನದ ಕ್ಲೀಷೆಯಲ್ಲ ಬಗೆಹರಿದಂತೆ ಅಂದು ರಾತ್ರಿ ಒಳ್ಳೆಯ ನಿದ್ದೆ ಬಂತು. 
ಮರುದಿನದ ಶಾಂತಚಿತ್ತ ಮನ ಹರಕೆಯನ್ನೇ ಮರೆತು ಹೊಗಿತ್ತು. ಅದೆಲ್ಲ ಕೈಗೂಡುವ ಹರಕೆಯಲ್ಲ ಅಂತ ಸುಮ್ಮನಾದೆ. 


                                   ಆದರೆ......... ತಿಬ್ಬಾದೇವಿ ಮರೆತಿರಲಿಲ್ಲ...!!
ಭಾಗ ೩  

Sunday, July 7, 2013

ಇಷ್ಟ ಬಂದಂತೆ ಬದುಕುವುದು ಅಷ್ಟು ಸುಲಭವಲ್ಲ.

ಇಷ್ಟ ಬಂದಂತೆ ಬದುಕುವುದು ಅಷ್ಟು ಸುಲಭವಲ್ಲ. ಬದುಕಿನ ಬೇಕು-ಬೇಡಗಳನ್ನೆಲ್ಲಾ ಪರಿಗಣಿಸಿ ಸಮತೋಲಿತ ಸರ್ವೇ ಸಾಮಾನ್ಯ ಜೀವನ ನಡೆಸುವುದು  ಒಂದು ಕಲೆ. 


ಹೊಸ ಲ್ಯಾಬ್ ನಲ್ಲಿ ಸಮಯ ದಾಟಿದರೂ ಮುಗಿಯದ experiment ಗಳು, ಮುಗಿದರೂ ಮುಗ್ಗರಿಸುವ results ಗಳು, ಬಾಸ್ ಮುಂದೆ ಆಗೋ ಅಭಾಸಗಳು, ಬತ್ತಿ ಹೋದ grantನ  ಒತ್ತಡಗಳು ಎಲ್ಲವೂ ತಲೆಯೊಳಗೆ ಜಮೆಯಾಗಿ ಮನೆ ತಲುಪುವ ಮುನ್ನಾ ಮರೆಯುವ ಹುನ್ನಾರ. ಇನ್ನು ಮನೆ ತಲುಪಿದ ಮೇಲೆ ಮತ್ತೊಂದು ಪ್ರಪಂಚ.  ಮನೆ ತಲುಪಿದರೂ ಮರೆಯದೇ ಕಾಡುವ  ಅರ್ಧಕ್ಕೇ ನಿಂತ manuscript ಗಳು, ಭಾರತದಲಿ ನೆಲೆ ನಿಲ್ಲಲು ಅವಕಾಶಗಳ  ಹುಡುಕಾಟಗಳು, "ಬೆಲೆಯೇರುವ ಮುಂಚೆ ಸೈಟ್ ತಗೋ, ಮನೆ ತಗೋ"  ಎಂಬ ದಿನಂಪ್ರತಿ ಪಂಚ್ ಗಳು. ಬಂದ ತಕ್ಷಣ ಕಂಪ್ಯೂಟರ್ ಮುಂದೆ ಕೂರಬೇಡಿ ಎಂಬ ದೂರುಗಳು... ಇಷ್ಟೆಲ್ಲವನ್ನು ಬದಿಗೊತ್ತಿ ಮಡದಿಗೊಂದು ವೀಕೆಂಡ್ ಶಾಪಿಂಗ್, ಮಗನಿಗೊಂದು monthly ಪಿಕ್ನಿಕ್. ನನಗೊಂದು cricket. ಹೀಗೆ ಎಲ್ಲರನ್ನು ಅಲ್ಪ ಸ್ವಲ್ಪ ಖುಷಿಯಾಗಿಡಲು ಪ್ರಯತ್ನಿಸುತ್ತಾ ಹಾಗೇ ನಾನೂ ಹರುಶದಿಂದಿರಲು ಹವಣಿಸುತ್ತಲೇ ಇರುವೆ.

ಮನದಲ್ಲಿ, ಮನೆಯಲ್ಲಿ ಅದೆಷ್ಟೇ ಜಂಜಾಟಗಳಿದ್ದರು ಅವನ್ನೆಲ್ಲ ಮೂಟೆಕಟ್ಟಿ ಅಟ್ಟದ ಮೇಲೆಸೆದು ಜಗದ ಮುಂದೆ ಖುಷಿಯ ಸೆಲೆ ಹರಡಲು ಫೇಸ್ಬುಕ್ ಮುಂದೆ ಕೂರುವೆ. ಎಲ್ಲರಿಗೂ ಸಾಮಾನ್ಯ ಸಾಧಾರಣ ಅನಿಸುವ ಕೆಲವು ಸಣ್ಣ ಪುಟ್ಟ ಕೆಲಸಗಳು ಅದೆಷ್ಟು ಸಮಯ ಕೇಳುತ್ತವೋ ಅದು ಮಾಡುವಾಗಲೇ ತಿಳಿಯುವುದು. ಉದಾಹರಣೆಗೆ ಫೇಸ್ಬುಕ್ ಗೆ ಒಂದು ಫೋಟೋ upload ಮಾಡಲು, ನೂರು ಫೋಟೋಗಳ ನಡುವೆ best one ಸೆಲೆಕ್ಟ್ ಮಾಡಿ, ಟ್ರಿಮ್ ಮಾಡಿ, edit ಮಾಡಿ, ಒಂದು ಕ್ಯಾಪ್ಶನ್ ಕೊಟ್ಟು publish ಎಂದು ಕ್ಲಿಕ್ ಮಾಡಲು ಹಿಡಿಸುವ ಸಮಯ??? 

ಆದರೂ ಫೇಸ್ಬುಕ್ ಮುಂದೆ ನನ್ಗನಿಸಿದ್ದನ್ನೆಲ್ಲ ಒದರುತ್ತಲೇ ಇರುತ್ತೀನೆ, ಫೇಸ್ಬುಕ್ ಮುಂದೆ ಯಾಕಷ್ಟು ಸಮಯ ಎಂಬ ಕುಹಕಕ್ಕೆ ಇಲ್ಲಿದೆ ನನ್ನ ಉತ್ತರ.


ಫೇಸ್ಬುಕ್  ಒಂದು entertainment ಸೈಟ್ ಅಷ್ಟೇ ಅಲ್ಲ. ಲ್ಯಾಬ್ ಕ್ಯೂಬಿಕಲ್ ನಿಂದ ಹೊರಬಂದು ಸಮಾಜಮುಖಿಯಗಲು ಅನುವು ಮಾಡಿಕೊಡೋ  ಕಿಟಕಿ ಅದು. ದಿನಪತ್ರಿಕೆಗಿಂತ ಮೊದಲೇ ತಿಳಿಸೋ newsbox, ಅಲ್ಲೆಲ್ಲೋ ಮರೆತು ಹೋದ ಮುಖ, ಜನ್ಮ ದಿನ, ವಾರ್ಷಿಕೋತ್ಸವ ಹಬ್ಬ ಹರಿದಿನಗಳನೆಲ್ಲಾ ಎತ್ತಿ ತಂದು ಮುಂದಿರಿಸೋ memory booster. ಎಲ್ಲಕಿಂತ ಮಿಗಿಲಾಗಿ ನಮ್ಮ ದುಖ ಕಿರಿಕಿರಿಗಳನೆಲ್ಲ ಮರೆಸಿ ಖುಷಿಯ ನೆನಪುಗಳನ್ನು ಚಿತ್ರ ಸಹಿತ ದಾಖಲಿಸಿ  ಪ್ರಪಂಚಕ್ಕೆ ನಾನೊಬ್ಬ ಸುಖಜೀವಿ ಎಂದು ಬಿಂಬಿಸೋ ಅಧ್ಬುತ ವೇದಿಕೆಯದು.

ನಮ್ಮ ಖುಷಿಗಳನ್ನಳೆಯುವ ನಿಜವಾದ ಸಾಧನವೆಂದೊದ್ದಿದ್ದರೆ ಅದು ಮತ್ತೊಬ್ಬರ ಮೆಚ್ಚುಗೆ. ಎಷ್ಟು ಜನ ನಮ್ಮನ್ನು ಮೆಚ್ಚುತ್ತಾರೋ, ಹೊಗಳುತ್ತಾರೋ, ಅನುಸರಿಸುತ್ತಾರೊ ಅಷ್ಟು ಸಂತೋಷ ನಮ್ಮ ಮನವನ್ನಳಾತೊಡಗುತ್ತದೆ. ಅಂತೆಯೇ ನಾನು ಖುಷಿಯಾಗಿದ್ದೀನೋ ಇಲ್ಲವೋ ಎಂಬುದು ಕನ್ನಡಿ ಮುಂದೆ ನಿಂತರೆ ತಿಳಿಯುವ ಸಂಗತಿಯಲ್ಲ. ನಾವದೆಷ್ಟೇ ದುಖದಲ್ಲಿದ್ದರೂ ಜಗಕೆ ನಗುಮುಖವ ತೋರಿಸಿ. ಜಗವೆಂಬ ಕನ್ನಡಿ ನಮ್ಮ ನೋಡಿ Wow how lucky you are ..! ಅಂತಲೋ ಕಡೆ ಪಕ್ಷ he is just posing ಅಂತಾದರೂ ಅನ್ನಬೇಕು. ನಮ್ಮ ಖುಷಿಯ ಕಂಡು ಜನ ಮೆಚ್ಚದಿದ್ದರೂ atleast ಸ್ವಲ್ಪ  ಕರುಬುವಂತಾದರೂ ಇರಬೇಕು. ನಮ್ಮ ಹತ್ತಿರದವರು ಮೆಚ್ಚಿದಷ್ಟು ಖುಷಿ ಹೆಚ್ಚುತ್ತದೆ ನಿಜ ಆದರೆ ಅಂತೆಯೇ ಮೆಚ್ಚಿದಂತೆ ನಟಿಸಿ ಮುಚ್ಚು ಮರೆಯಲಿ ಕರುಬಿದರೆ ನಾವೇನು ಕಮ್ಮಿ ನಾವೂ ಮತ್ತಷ್ಟು ಉತ್ತೇಜಿತರಾಗಿ ಉಬ್ಬುತ್ತೇವೆ. ಈಗ ನಾನು (ನಾವು) ಫೇಸ್ಬುಕ್ ನಲ್ಲಿ ಮಾಡುತ್ತಿರೋದು ಅದನ್ನೇ ತಾನೇ.

We always wear a mask but Select the mask which one you want to wear on that day. 
ಸುಳ್ಳೋ ನಿಜವೋ, ಸುಳ್ಳಾದರೂ ಸರಿ ನಗುವ ತೋರಿ ಜಗಕೆ. Practice makes man perfect ಎಂಬಂತೆ ಖುಷಿಯು ಅಭ್ಯಾಸವಾಗಿ ಒಂದಲ್ಲಾ ಒಂದು ದಿನ ಬೇಸರದಲ್ಲೂ ನಗೆಯ ಬುಗ್ಗೆ ಹರಿಯಬಹುದು. 

                                                                - ಮಾನಸ 

Monday, December 12, 2011

ಅವನ ಜೊತೆಗಿನ ಒಂದು ಸಂವಾದ 
                                                                                                                                07.07.2011
                                                                                                                                Baltimore  

ನನ್ನ ಮಾವ ಪಕ್ಕ practical ಮನುಷ್ಯ, ನನಗಿಂತ ಕೆಲವೇ ವರ್ಷ ದೊಡ್ಡವನಾದರೂ  ಅವನ ಯೋಚನಾಗತಿ, ಜ್ಞಾನದ ಆಳ, ಭಾವದ ಲಹರಿ ಮತ್ತು ತರ್ಕಬದ್ಧ ಮಾತು ನನ್ನ ಜೀವನದ ಮಾರ್ಗದರ್ಶಿ. ಅವನ ಜೊತೆ ವಾಗ್ವಾದ ಮಾಡುತ್ತ ಮಾಡುತ್ತಲೇ ಅವನ ಮಾತು ಕೇಳುತ್ತಿರುತ್ತೇನೆ.  ನನ್ನ ಜೀವನದ ಪ್ರತಿಯೊಂದು ನಿರ್ಧಾರದ ಹಿಂದೆ ಅವನ ಅಣತಿ ಇರುತ್ತಿತ್ತೆನೋ ಎನಿಸುವಷ್ಟು ಪ್ರಭಾವಿ ಮನುಷ್ಯ. ಅವನ ಪ್ರತಿಯೊಂದು ಮಾತು, ಕೆಲವೊಮ್ಮೆ ಕ್ರಿಯೆಯು ತರ್ಕ ಬದ್ಧವಾಗಿರುತ್ತೆ. ವಾದಕ್ಕೆ ನಿಂತರೆ ತರ್ಕಬದ್ಧವಾಗಿ ಗೆಲ್ಲೋದು ಅಸಾಧ್ಯ. ಮೊನ್ನೆ ಫೋನ್ ಮಾಡಿದಾಗ ಒಂದೆರಡು ವಿಷಯಗಳ ಬಗ್ಗೆ ಚರ್ಚೆ ನಡೆಯಿತು ಅದರ ಸಂಕ್ಷಿಪ್ತ ರೂಪ ಇಲ್ಲಿದೆ. 

ಎಲ್ಲರು ಯಾಕೆ ನಮ್ಮಲ್ಲಿಗೆ ಲಗ್ಗೆ ಇಡುತ್ತಾರೆ. 

'ಇಟ್ಟಿಗೆ ಸಿಮೆಂಟು' ಅವರ ಒಂದು ಲೇಖನ ಓದಿ ಅದರ ಬಗ್ಗೆ ನನಗೆ ಮೂಡಿದ ಪ್ರಶ್ನೆಗೆ ನನ್ನ ಮಾವನ ಉತ್ತರ...

ಅನಾದಿ ಕಾಲದಿಂದಲೂ ಮನುಷ್ಯ ತನಗೆ ಸ್ವಾಭಾವಿಕವಾಗಿ ಅನುಕೂಲವಿರುವ ವಾತವರಣದಲ್ಲಿ ಒಕ್ಕಣೆಯೂಡಲು ಸದಾ ಕಾಯುತ್ತಿರುತ್ತಾನೆ. ಯಾವುದೇ ಒಂದು ದೇಶ ಅಥವಾ ರಾಜ್ಯ ಹೊರಗಿನವರನ್ನು ಒಳಬರದಂತೆ ತಡೆಯುವುದು ಅಲ್ಲಿಯ ಹವಾಮಾನ, ಆಹಾರ ಪದ್ಧತಿ ಮತ್ತು ಭಾಷೆ,  ನಂತರ ಅಲ್ಲಿಯ ಜನರ ಆಚಾರ ವಿಚಾರ ಹಾಗು ಹೊಂದಾಣಿಕೆ ಸ್ವಾಭಾವ. ನಮ್ಮ ಕರ್ನಾಟಕ ಸ್ವಾಭಾವಿಕವಾಗಿ ಹವಾಮಾನ ನಿಯಂತ್ರಿತ ನಾಡು, ಮೇಲಾಗಿ ಇದು ದುಷ್ಟ ಶಕ್ತಿಗಳಿಂದ ದೂರವಿರುವ ನಾಡು. ಇಲ್ಲಿನ ಜನರೆಲ್ಲಾ ತುಂಬಾ ಶಿಷ್ಟರು ಹಾಗು ಸದ್ಗುಣರು, ಎಲ್ಲರನ್ನು ಆದರಿಸಿ ಆಮಂತ್ರಿಸುತ್ತರೆಂದಲ್ಲಾ. ಹೊರಗಿನವರನ್ನು ಕಂಡರೆ ಇವರಿಗೂ ಇರಿಸು ಮುರಿಸು ಆದರೆ ಅವರನ್ನು ದಿಕ್ಕರಿಸಿ ದೂರ ಸರಿಸುವ ದುಷ್ಟತನವಿಲ್ಲ. ಇನ್ನು ಒಳಬಂದವರಿಗೆ ಅವಕಾಶಗಳು  ಹೇಗೆ ದೊರೆಯುತ್ತವೆ? ಅವರು ಒಳಬರುವುದಕ್ಕಿಂತ ಮುಂಚೆ ಅಲ್ಲೊಂದು ಅವಕಾಶ ವಿತ್ತು ಅಂತ ನಮಗೆ ತಿಳಿದೆ ಇರುವುದಿಲ್ಲ, ಬೇರೆಯವರು ಒಳಬಂದಮೆಲೆಯೇ ನಮಗೆ ತಿಳಿಯೋದು ಓಹೋ, ಅಲ್ಲೊಂದು ಅವಕಾಶವಿತ್ತಲ್ಲವಾ ಅಂತ. ಅದೆಲ್ಲಕ್ಕಿಂತ ಹೆಚ್ಚಾಗಿ ನಮ್ಮಲ್ಲಿ ಸ್ವಾಭಾವಿಕವಾಗಿ ಮೈಗೂಡಿಕೊಂಡಿರುವ ಸೋಮಾರಿತನ ಒಂದು proactive ಮನಸ್ಥಿತಿಯನ್ನು ಕೊಂದು ಹಾಕಿದೆ.

ಮತ್ತೊಂದು ವಿಷಯ. ನಾವೇನು ಕಮ್ಮಿನಾ, ಇಲ್ಲಿ ಕನ್ನಡ ಸಂಘದ function ಗಳಿಗೆ ಹೋದರೆ, ಇದೇನು ಮೈಸೂರ್ ನಾ ಟೌನ್ ಹಾಲ್ ಗೆ ಬಂದ ಹಾಗಿದೆ ಅನಿಸುವಷ್ಟು ಕನ್ನಡದ ಜನ ತುಂಬಿ ತುಳುಕುತ್ತಿರುತ್ತಾರೆ (ಅಮೆರಿಕಾದ ಕನ್ನಡ ಸಂಘ). 


ಈ ದೇಶ ಬದಲಾಗೊಲ್ಲಾ ಬಿಡು!! 

ಅದು ಎಲ್ಲರೂ ಆಡುವ ಮಾತು, ಕಾರಣ ನಮ್ಮ ಅಸಹಾಯಕತೆಯನ್ನು ಪ್ರತಿಬಿಂಬಿಸೋ ಪದ ಇದಕ್ಕಿಂತ ಮತ್ತೊಂದು ಸಿಗಲಾರದು. ಈ ವಿಷಯದ ಬಗ್ಗೆ ನನಗು ನನ್ನ ಮಾವನಿಗೂ ಸದಾ ವಾಗ್ವಾದ ಇದ್ದೆ ಇರುತ್ತೆ.

ಅವನ ವಾದ ಹೀಗೆ...
ನಿಧಾನವಾಗಿ ಅನುಕೂಲ ಮತ್ತು ಪ್ರತಿಕೂಲ ಪರಿಸ್ಥಿತಿಗಳಿಗೆ ಹೊಂದಾಣಿಕೆ ಯಾಗುತ್ತ ಬದಲಾಗೋದು "evolution", ಮತ್ತು ಅದರಿಂದಾದ ಬದಲಾವಣೆಗಳು ಸ್ವಾಭಾವಿಕವೆನಿಸಿ ಒಂದಷ್ಟು ಯುಗ ಶಾಶ್ವತ ವಾಗಿರುತ್ತವೆ.

ಪ್ರತಿಕೂಲ ಪರಿಸ್ಥಿತಿಯನ್ನು ಧಿಕ್ಕರಿಸಿ ಅನುಕೂಲಕರ ವನ್ನಾಗಿಸಲು ಸ್ವಶಕ್ತಿಯಿಂದ ಹೋರಾಡಿ ಬದಲಾಯಿಸಿಕೊಳ್ಳೋದು   "revolution", ಮತ್ತು ಅಂತಹ ಬದಲಾವಣೆಗಳು ಶಾಶ್ವತವೇನಲ್ಲ, ಎಂದಾದರು ಬದಲಾಗಬಹುದು ಅದನ್ನು ಹಿಡಿದಿಡಲು ಒಂದಷ್ಟು ಶಿಸ್ತು, ಸಂಯಮ ಬೇಕು.

ಆದರೆ ಅದೇನೋ ನಮ್ಮ ದೇಶ revolution ಇಲ್ಲದೆ ಬಹು ಬೇಗ ಬದಲಾಗಿ ಹೋಗಿದೆ. ಆ ಬದಲಾವಣೆಗೆ ನಮ್ಮ ಜನ ಒಗ್ಗಿ ಹೋಗಿದ್ದಾರೆ. ಅದನ್ನು ಮತ್ತೆ ಸರಿದಾರಿಗೆ ತರಲು evolution ಗಾಗಿ ಕಾದರೆ ಸಾವಿರಾರು ವರ್ಷಗಳು ಹಿಡಿಯುತ್ತೆ. ಅದೇ revolution ಮುಖಾಂತರ ಹೋದರೆ ಒಂದೆರಡು ವರ್ಷ ಸಾಕು.

ಯುವ ಶಕ್ತಿ ಒಂದಾಗಿ (ಒಂದಾಗುವ ಅವಶ್ಯಕತೆಯೂ ಇಲ್ಲವೇನೋ) ತಮ್ಮ ತಮ್ಮ ಜೀವನ ಕ್ರಿಯೆಗಳಲ್ಲಿ ಒಂದಷ್ಟು ಶಿಸ್ತು ಮತ್ತು ನೈತಿಕತೆಯನ್ನು ರೂಢಿಸಿಕೊಂಡರೆ ಸಾಕು. ದೇಶದ mainstream ಸರಿಯಾದಂತೆ. ಮುಂದಿನ ೧೦ ವರ್ಷ ಇದೆ ಧಾಟಿ ಮುಂದುವರಿದರೆ ಜಡ್ಡು ಹಿಡಿದ ಹಳೆ ತಲೆಗಳು (ದೇಶದ ಆಡಳಿತ ಮತ್ತು beurocracy ಯಿಂದ ಮರೆಯಾಗುತ್ತಾರೆ) ನಂತರ ಮುಂದಿನ ತಲೆಗಳಿಗೆ ನೀವೇ ಮಾದರಿಯಾಗುತ್ತೀರಿ. ದಾರಿ ತಪ್ಪುವ ಜನಕ್ಕೆ ತಿದ್ದುವ ಅಧಿಕಾರವು ನಿಮ್ಮ ಕೈಲಿರುತ್ತೆ.


ಒಂದಷ್ಟು ಜನ ಅವರವರ ಜೀವನದಲ್ಲಿ ಸರಿಯಾಗಿಬಿಟ್ಟರೆ ಇಡಿ ದೇಶ ಸರಿಹೊಗೋದು ಹೇಗೆ ಸಾಧ್ಯ? ನನ್ನ ಪ್ರಶ್ನೆ.


ಯಾಕೆ ಸಾಧ್ಯವಿಲ್ಲ.
ಪ್ರಿಮರಿ ಸ್ಕೂಲ್ ನಿಂದ ಕಾಲೇಜ್, ಪೋಲಿಸ್ ಇಂದ lawyerವರೆಗೂ, medicine, ಮೀಡಿಯಾ, software ಎಲ್ಲ ಮುಖ್ಯವಾಹಿನಿಯಲ್ಲೂ ನಿನ್ನ ವಯಸ್ಸಿನವರೆ ತುಂಬಿ ತುಳುಕಿದ್ದಾರೆ. ಅವರೆಲ್ಲರೂ ಒಂದು ನಿರ್ಧಿಷ್ಟ ದಿನದಿಂದ  "ಸರಿ ಇಂದಿನಿಂದ ನಾನು ಬದಲಾಗುತ್ತೇನೆ ಎಂದು ನಿಂತರೆ ಹೇಗೆ". ಬದಲಾಗೋದು ಎಂದರೆ ಅದೊಂದು ಮಹಾ ಯುದ್ಧವಲ್ಲಾ. ಸಣ್ಣ ಸಣ್ಣ ವಿಷಯಗಳನ್ನು ಬದಲಿಸಿಕೊಂಡರು ಸಾಕು ಪರಿಣಾಮಗಳು ದೊಡ್ಡದಾಗೆ ಇರುತ್ತವೆ.

ಒಬ್ಬ ಪೋಲಿಸ್ ಫ್ರೆಂಡ್ ಇಂದು ನಾನು ಯಾರ ಬಳಿಯೂ ಹಣ ಕೇಳೋಲ್ಲ, ಒಬ್ಬ lawyer ಇಂದು ನಾನು ಆ ಕಟು ಅಪರಾಧಿ ಪರವಾಗಿ ಮಾತಾಡೋಲ್ಲ, ಒಬ್ಬ ಟೀಚರ್-ಇಂದು ನಾನು ಆ ಕೊನೆಯ ಬೆಂಚಿನ ಹುಡುಗನಿಗೆ ಅರ್ಥವಾಗುವಂತೆ ಪಾಠ ಮಾಡುತ್ತೇನೆ, ಒಬ್ಬಡಾಕ್ಟರ- ಆ ರೋಗಿಗೆ ನಿಜವಾಗಿಯೂ ಅಂತಹ ಮಹಾ ರೋಗವೆನಿಲ್ಲಾ, ಅಷ್ಟೊಂದು ಟೆಸ್ಟ್ ಗಳ ಅಗತ್ಯವಿಲ್ಲ. ಒಬ್ಬ correspondent- ಇಂದು ಈ ಅನಗತ್ಯ ದ್ವೇಷ ಮೂಡಿಸೋ ಕಾರ್ಯಕ್ರಮ ನಿರೂಪಿಸೋಲ್ಲ, ಒಬ್ಬ software engi - ಜಗದ ಸಮಸ್ಯೆಗಳಿಗೆಲ್ಲ ಕಂಪ್ಯೂಟರ್ ಉತ್ತರವಲ್ಲಾ, ನಮ್ಮ ನೆರೆಮನೆಯ ಆ ಮಗುವಿಗೆ ನಗು ಆಟಿಕೆ ಕೊಟ್ಟರೂ ಸಾಕು. ನಿಧಾನವಾಗಿ ಅದೇ ರೂಢಿಯಾಗಿ ಮಾರ್ಪಟ್ಟು ಬದಲಾವಣೆ ಕನಸಿನಂತೆ ನನಸಾಗಬಹುದು.

ಅವನ ಮಾತು ಕೇಳುತ್ತಿದ್ದರೆ ಹೌದಲ್ಲವಾ ಎನಿಸುತ್ತಿತ್ತು. ಸರಿ ನಾಳೆಯಿಂದ ಬದಲಾಗೋ ಸಮಾಜದ ಮೊದಲ ಪ್ರಜೆ ನಾನೇ ಆಗುತ್ತೇನೆ, ಆದರೆ ನಾನು ಏನು ಬದಲಾಯಿಸಿಕೊಳ್ಳಬೇಕು. ನಾನು ಪೋಲಿಸ್ ಅಲ್ಲ ಟೀಚರ್ ಅಲ್ಲ, ಡಾಕ್ಟರ ಅಲ್ಲ, lawyer ಅಲ್ಲ, ಸಾಫ್ಟ್ವೇರ್ ಅಲ್ಲ, ದುಡ್ಡು ತಿನ್ನೋಲ್ಲ, ಮೋಸ ಮಾಡೋಲ್ಲ, ಕಳ್ಳ ಅಲ್ಲವೇ ಅಲ್ಲ. ನಾನೊಬ್ಬ researcher ಹೇಗೆ ಬದಲಾಗಲಿ? ನನ್ನಿಂದ ಸಮಾಜಕ್ಕೆ ಏನು ಕೊಡುಗೆ ನೀಡಬಹುದು??

ಎಂದಿನಂತೆ 8 ಗಂಟೆಗೆ ಎದ್ದು ಗಡಿಬಿಡಿಯಲ್ಲಿ ರೆಡಿ ಯಾಗಿ, Cereals ತಿಂದು ಹಾಲು ಕುಡಿಯಲು ಸಮಯ ಸಾಲದೇ, wallet ಮರೆತು ಕಾರ್ ಗೆ ಹಾರೋ ಬದಲು, ನಾಳೆ ಬೆಳಿಗ್ಗೆ ಆರು ಗಂಟೆಗೆ ಎದ್ದು, 7 ಕ್ಕೆ ರೆಡಿ ಆಗಿ. ತಿಂಡಿ ರೆಡಿ ಮಾಡುತ್ತಿರೋ ಹೆಂಡತಿಗೆ ಒಂದಷ್ಟು ಸಹಾಯ ಮಾಡಿ ತಿಂಡಿ ತಿಂದು ಆರಾಮವಾಗಿ ಲ್ಯಾಬ್ ಗೆ ಹೋಗೋದು, ಅದೇ ನಾ ನನ್ನಲ್ಲಿ ಮಾಡಿಕೊಳ್ಳುವ ಬದಲಾವಣೆ. ಇದೇ ದೇಶ ಬದಲಾಯಿಸೋ ಪ್ರಯತ್ನದಲ್ಲಿಯ ನನ್ನ ಮೊದಲ ಹೆಜ್ಜೆ. 

ಆದರೆ ನಾಳೆ ಎದ್ದಾಗ ಮೂಡೋ ಭಾವ ಬೇರೆ. ಅಯ್ಯೋ ಜೀವನದ 25 ವರ್ಷ discipline, time table ಅಂತ ಒದ್ದಾಡಿ ಆಗಿದೆ ಈಗಲೂ ಅದೇ ಬೇಕಾ,  ಬೇಗ ಏನ್ ಏಳೋದು ಬಿದ್ಕೋ ಇನ್ನರ್ದ ಗಂಟೆ ಎನ್ನುತ್ತೆ ಮನ. ಮನಕ್ಕೆ ಮೋಸ ಮಾಡೋದು ಉಂಟೆ???
ಅಲ್ಲಿಗೆ, ಬದಲಾವಣೆ ಎಂಬ ಬೆಕ್ಕಿಗೆ ಗಂಟೆ ಕಟ್ಟೋ ಮೊದಲ ಇಲಿ ಮಲಗಿದಂತೆ .....!
                                                                                                                : ಅನಿ-ಸಿದ್ದು 

Tuesday, December 21, 2010

ಬಿಲ್ಲಿಂಗ್ ಹುಡುಗನೊಬ್ಬ ಸಾಮ್ರಾಜ್ಯ ಕಟ್ಟಿದ ಬಗೆ

ಮನೆಯಲ್ಲಿ ವಯಸ್ಸಾದ ಅಮ್ಮ, ಹೆಸರಿಡುವ ಮೊದಲೇ ತೀರಿಹೋದ ಅಪ್ಪ.


ಓದಲು ಹಣವಿಲ್ಲದೆ ವಿದ್ಯೆ ಅರ್ಧಕ್ಕೆ ನಿಂತಿತು,


ಹೊಟ್ಟೆಪಾಡಿಗಾಗಿ ಒಂದು ಶೂ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದರೆ ೩ ತಿಂಗಳೊಳಗೆ ಫ್ಯಾಕ್ಟರಿಯೇ ಮುಚ್ಚಿ ಹೋಯ್ತು.


ಇನ್ನು ಪಟ್ಟಣದಲ್ಲಿ ಇದ್ದು ಪ್ರಯೋಜನವಿಲ್ಲವೆಂದು ಹಳ್ಳಿಗೆ ಬಂದರೆ, ಊರ ತುಂಬಾ ಪ್ಲೇಗ್ ಎಂಬ ಹೆಮ್ಮಾರಿ ಹಾಸು ಹೊಕ್ಕು ಕುಳಿತಿದ್ದಾಳೆ, ಒಳ ಹೋಗುವಂತಿಲ್ಲ ಹೊರಗೆ ಬದುಕಲು ಕಾಸಿಲ್ಲ, ಕೆಲಸವಿಲ್ಲ, ಹೇಳಿಕೊಳ್ಳುವಂತ ಗೆಳೆಯರು ಇಲ್ಲ. ವಿಧಿಯಿಲ್ಲ ಊರು ಬಿಡಲೇ ಬೇಕಾಯ್ತು.

ಅಲ್ಲೆಲ್ಲೋ ಉಳಿಸಿದ್ದ 25 ರುಪಾಯಿ ಇಟ್ಟುಕೊಂಡು ಸಿಮ್ಲ ಎಂಬ ನಗರಿಗೆ ಬಂದಿಳಿದಾಗ ಆ ಹುಡುಗನ ಕಣ್ಣಲ್ಲಿ ಕನಸುಗಳು ಮಾತ್ರ ತುಂಬಿದ್ದವು.


ವಾರ ಪೂರ್ತಿ ಊರೆಲ್ಲ ಸುತ್ತಿದರೂ ಯಾವುದೇ ಫಲವಿಲ್ಲ ಎಂದರಿತ ಮೇಲೆ ಈ ಊರನ್ನು ಬಿಟ್ಟು ಮುಂದಿನ ಊರಿಗೆ ಹೊರಟು ನಿಂತ ಹುಡುಗನಿಗೆ, ಎದುರಲ್ಲಿ ಒಂದು ಭವ್ಯವಾದ ಹೋಟೆಲ್ ಕಂಡಿತು,


ಏನೋ ಆಸೆ ಆದರೆ ಒಳಗೆ ಹೋಗಲು ಹಿಂಜರಿಕೆ ಆದರೆ ಅವಶ್ಯಕತೆ ಮತ್ತು ಅನಿವಾರ್ಯತೆ ಹಿಂಜರಿಕೆಯನ್ನು ಹಿಂದಿಕ್ಕಿ ಮುಂದಡಿ ಹಿಡಿಸಿತು.

ಹೋಟೆಲ್ ಮ್ಯಾನೇಜರ್ ಮುಂದೆ ಹೋಗಿ ನಿಂತು ಕೇಳಿದ


- ಕಷ್ಟದಲ್ಲಿದ್ದೇನೆ, ನನಗೊಂದು ಕೆಲಸವಿದ್ದರೆ ನೀಡಿ, ಗೊತ್ತಿರುವ ಕೆಲಸವನ್ನು ನಿಷ್ಠೆಯಿಂದ ಮಾಡುವ ಮನಸ್ಸಿದೆ, ಹೊಸ ಕೆಲಸವಿದ್ದರೆ ಕಲಿಯುವ ಶ್ರದ್ದೆಯಿದೆ.


ಹುಡುಗನ ತೀಕ್ಷ್ಣ ನೋಟ, ಹಸಿವಿನಲ್ಲೂ ಮಾಸದ ಮಂದಹಾಸ ಮತ್ತು ಏನೋ ಸಾಧಿಸ ಬಯಸುವ ಹೊಳಪು ಕಂಗಳು ನೋಡಿ ಮ್ಯಾನೇಜರ್ Mr Groverಗೆ ಏನನಿಸಿತೋ ಏನೋ, ಮರು ಮಾತನಾಡದೆ ತಿಂಗಳಿಗೆ ೪೦ ರುಪಾಯಿ ಸಂಬಳ ಕೊಟ್ಟು, ಬಿಲ್ಲಿಂಗ್ ಕೆಲಸಕ್ಕಿಟ್ಟುಕೊಂಡನು. 

ಆಗ ಆತನಿಗೇನು ಗೊತ್ತಿತ್ತು ಭವಿಷ್ಯದ ಪ್ರಥಮ ಅಂತರ ರಾಷ್ಟ್ರೀಯ ಪಂಚತಾರ ಹೋಟೆಲ್ (Pioneer of first Five-star International Hotel of India) ನಿರ್ಮಾತನಿಗೆ ಬಿಲ್ಲಿಂಗ್ ಕೆಲಸ ಕೊಡುತ್ತಿದ್ದೆನೆಂದು...! 


ಸಧ್ಯ,, ಕೈಯಲ್ಲಿ ಕೆಲಸ ತಲೆ ಮೇಲೆ ಸೂರು ಸಿಕ್ಕಿತು ಅಷ್ಟೂ ಸಾಕು ಜೀವನ ಒಂದು ಹದಕ್ಕೆ ಬಂದಂತೆನಿಸಿತು ಆ ಹುಡುಗನಿಗೆ.


ಒಂದೆರಡು ತಿಂಗಳ ನಂತರ ಹೋಟೆಲ್ ಮ್ಯಾನೇಜ್ಮೆಂಟ್ ಬದಲಾಯ್ತು. Mr Clarke ಎಂಬ ಮತ್ತೊಬ್ಬ ಸಂಭಾವಿತರು ಮ್ಯಾನೇಜರ್ ಆಗಿ ಬಂದರು. ಎರಡು ವರ್ಷದ ಅವಧಿಯಲ್ಲಿ ಅದೇನೋ ಅವರಿಗೆ ಈ ಹುಡುಗನ ನಿಷ್ಠೆ ನಿಯತ್ತು ಇಷ್ಟವಾಗಿಬಿಡ್ತು, ಬಿಲ್ಲಿಂಗ್ ನಿಂದ ನೇರ ತಮ್ಮ ಅಸಿಸ್ಟೆಂಟ್ ಆಗಿ ತೆಗೆದುಕೊಂಡರು, ಸಂಬಳ ೫೦ ರಿಂದ ೧೦೦ ಕ್ಕೆರಿತು.


10 ವರ್ಷಗಳ ಒಡನಾಟದಲ್ಲಿ ಹೋಟೆಲ್ ಉದ್ಯಮದ ಒಳಹೊರಗನ್ನು ಅರಿಯುತ್ತ ಹೋದ.  

ಹೀಗೆ ಸಮಯ ಕಳೆದಂತೆ ಒಂದು ದಿನ Mr Clarke ಸಹ ರಿಟೈರ್ ಅಗೋ ಸಮಯ ಬಂತು, ಹೋಟೆಲ್ಗಿದ್ದ ಘನತೆ ಮತ್ತು ಹೆಸರನ್ನು ಉಳಿಸಿಕೊಂಡು ಹೋಗುವ ಮತ್ತೊಬ್ಬ ಉತ್ತರಾಧಿಕಾರಿ ಹುಡುಕುತ್ತಿದ್ದ...

ಇಂತಹ ಸುವರ್ಣ ಅವಕಾಶ ಮತ್ತೆ ಸಿಗೊಲ್ಲವೆಂದು ತಿಳಿದಿದ್ದ ಆ ಹುಡುಗ ಅಲ್ಲ್ಲಿಇಲ್ಲಿ ತನ್ನ ಪರಿಚಯದವರೆನ್ನೆಲ ಬೇಡಿಕೊಂಡು, ತನ್ನ ಹೆಂಡತಿಯ ಒಡವೆಗಳನ್ನೆಲ್ಲಾ ಮಾರಿ ಒಂದಷ್ಟು ಹಣ ಹೊಂದಿಸಿ ಹೊಟೆಲ್ ನ್ನು ತಾನೇ ಖರೀದಿಸುವ ಇರಾದೆ ವ್ಯಕ್ತಪಡಿಸಿದ. 

ಈತನಿಗಿಂತ ಮತ್ತೊಬ್ಬ ವ್ಯವಹಾರಿಕ ಸಿಗೋದು ಕಷ್ಟ ಎಂದರಿತಿದ್ದ ಮ್ಯಾನೇಜರ್ ಸಮಾಧಾನಕರ ಬೆಲೆಗೆ ಹುಡುಗನಿಗೆ ಮಾರಿಬಿಟ್ಟ....!!


ಅಷ್ಟೇ.... ಅದು ಆತನ ಮೊತ್ತ ಮೊದಲ ಹೊಟೆಲ್. ......ಮುಂದಿನದು ಇತಿಹಾಸ...!!!


ಅಂದು ಸಂಜೆ ಮನೆಗೆ ಬಂದವನೇ ಮುದ್ದು ಮಗಳ ಬಳಿ ಕುಳಿತು ತಮಾಷೆಗೆಂದು ಹೇಳಿದ "ನೋಡುತ್ತಿರು ಮಗಳೇ, ನೀನು ಬೆಳೆದು ದೊಡ್ದವ ಳಾಗುವಷ್ಟರಲ್ಲಿ ನೀನು ಹೋದ ಕಡೆಯೆಲ್ಲ ನನ್ನ ಹೋಟೆಲ್ ಇರುವಂತೆ ಮಾಡಿರುತ್ತೇನೆ" ೩೦ ವರುಷಗಳ ನಂತರ ಆ ತಮಾಷೆಯ ವಾಕ್ಯ ನಿಜವು ಹಾಗಿಬಿಟ್ಟಿತು.


೧೦ ವರ್ಷದ ಹಿಂದೆ 40 ರು ಸಂಬಳಕ್ಕೆ ಸೇರಿದ ಹುಡುಗ ಇಂದು ಅದೇ ಹೊಟೆಲ್ ನ ಯಜಮನನಾಗಿದ್ದನು. ಅದಲ್ಲವೇ ಸಾಧನೆ.


ಆದರೆ ಅಷ್ಟಕ್ಕೇ ತೃಪ್ತಿ ಪಡದೆ ಮುನ್ನುಗ್ಗಿದ ಹುಡುಗ . ಮುಂದೆ ೪ ವರ್ಷದ ನಂತರ ಕಲ್ಕತ್ತಾ ದಲ್ಲಿ ಪ್ಲೇಗ್ ಹಾವಳಿ ಹೆಚ್ಚಾಗಿ ಎಲ್ಲ ಹೋಟೆಲ್ ಗಳು ನಷ್ಟ ಅನುಭವಿಸಿ ಅಲ್ಲಿಯ ಪ್ರತಿಷ್ಟಿತ Grand Hotel ಖರೀದಿಗೆ ಬಂತು, ಆತ್ಮೀಯರೆಲ್ಲ ಬೇಡವೆಂದರೂ, ನಷ್ಟದ ಅರಿವಿದ್ದರು ದೂರದೃಷ್ಟಿಯಿಂದ ಆ ಹೋಟೆಲ್ ಖರೀದಿಸಿದನು-

ಇದು ಆತನ ಜೀವನಕ್ಕೆ ಮತ್ತೊಂದು ತಿರುವು.

ಅಪರಿಮಿತ ಹಠ ಛಲ ಮತ್ತು ಪರಿಶ್ರಮದಿಂದ ೫ ವರ್ಷಗಳಲ್ಲಿ ಆ ಹೋಟೆಲ್ ಗೆ ಮರು ರೂಪ ನೀಡಿ ಹೋಟೆಲ್ ಪ್ರಪಂಚದಲ್ಲಿ ಹೊಸ ಅಲೆ ಸೃಷ್ಟಿಸಿದನು.

ಆತನ ಸಾಧನೆ ಗಮನಿಸಿ ಬ್ರಿಟಿಶ್ ಸರ್ಕಾರ ಆತನಿಗೆ "ರಾವ್ ಬಹಾದ್ದೂರ್" ಎಂಬ ಬಿರುದು ನೀಡಿತು.


ಚಕ್ರ ಉರುಳಿತು...

ಅಂದು ೧೧ ವರುಷದ ಹಿಂದೆ ಈ ಬಡ ಹುಡುಗನಿಗೆ ತಿಂಗಳಿಗೆ ೪೦ ರು ಕೊಟ್ಟು ಬಿಲ್ಲಿಂಗ್ ಕೆಲಸ ನೀಡಿದ್ದ Mr Grover ನನ್ನು ಕರೆದು ತಂದು ಈ ಹೊಸ ಹೋಟೆಲ್ ನ ಮ್ಯಾನೇಜರ್ ಹುದ್ದೆಯಲ್ಲಿರಿಸಿದನು ತಿಂಗಳಿಗೆ 1500 ಸಂಬಳ.


ಒಂದರ ಹಿಂದೆ ಒಂದರಂತೆ ದೇಶದ ಪ್ರಮುಖ ನಗರಳಲ್ಲಿ ಹೊಸ ಹೊಸ ಹೋಟೆಲ್ ತೆರೆಯುತ್ತ.. ಮತ್ತೆ ಮುಂದಿನ ೫ ವರ್ಷಗಳಲ್ಲಿ ಆತ ಭಾರತದ ಹೊಟೆಲ್ ಉದ್ದಿಮೆಯ ಹೊಸ ನಕ್ಷತ್ರವಾಗಿ ಉದಯಿಸಿ ಭಾರತದ ಪ್ರಮುಖ ನಗರಗಳಲೆಲ್ಲ ಆತನ ಹೊಟೆಲ್ ಸರಣಿಗಳು ಕಾಣಿಸಕೊಳ್ಳತೊಡಗಿದವು.ಇಂದು ಸಿಂಗಪೂರ್, ಸೌದಿ ಅರೇಬಿಯಾ, ನೇಪಾಲ್, ಶ್ರೀಲಂಕ, ಈಜಿಪ್ಟ್, ಆಫ್ರಿಕಾ ಸೇರಿದಂತೆ ಪ್ರಪಂಚಾದ್ಯಂತ 30 ಸ್ಟಾರ್ ಹೊಟೆಲ್  ೫ luxury cruiser ವಿಮಾನ ನಿಲ್ದಾಣದಲ್ಲಿನ ಬಾರ್ ಗಳು ಹೀಗೆ ಹನ್ನೆರಡು ಸಾವಿರ ಸಿಬ್ಬಂದಿ ಯನ್ನುಳ್ಳ ದೊಡ್ಡ ಸಾಮ್ರಜ್ಯವಿದೆ ಮತ್ತು   ಆಗ್ರ ದಲ್ಲಿರುವ 'ಅಮರವಿಲಾಸ್" ಹೊಟೆಲ್ ಏಷಿಯಾ ಖಂಡದಲ್ಲಿ 3 ನೆ Rank ಪಡೆದಿದೆ.ಒಂದು ಸಣ್ಣ ಹಳ್ಳಿಯಿಂದ ೨೫ ರು ಕೈಯಲ್ಲಿಟ್ಟುಕೊಂಡು ಹೊರಬಂದ ಒಬ್ಬ ಮಾಮೂಲಿ ಬಡ ಹುಡುಗನ ಸಾಧನೆ ಇದು.


ಭಾರತದ ಹೊಟೆಲ್ ಪರಂಪರೆಯನ್ನು ವಿಶ್ವದರ್ಜೆಗೆರಿಸಿದ, ಭಾರತದಲ್ಲಿ ಮೊಟ್ಟ ಮೊದಲು ಸ್ಟಾರ್ ಹೊಟೆಲ್ ಹುಟ್ಟು ಹಾಕಿದ ಧೀಮಂತ ವ್ಯಕ್ತಿ!!!!! ಆ ಹುಡುಗನ ಹೆಸರೇನು ಗೊತ್ತೇ????


                                                    ರಾವ್ ಬಹಾದ್ದೂರ್ ಮೋಹನ್ ಸಿಂಗ್

                                                            ........ ಗೊತ್ತಾಗಲಿಲ್ಲ ಅಲ್ಲವೇ.
                              ಆತನ ಪೂರ್ಣ ಹೆಸರು - ರಾವ್ ಬಹಾದ್ದೂರ್ ಮೋಹನ್ ಸಿಂಗ್ ಒಬೆರಾಯ್
                                (MS  Oberoi - The founder of  Oberoi group of ಹೋಟೆಲ್ಸ್)


ಯಾವುದು ಅಸಾಧ್ಯ, ಆತ ಗ್ರೇಟ್ ಒಬೆರಾಯ್ ಆಗೋ ಮುಂಚೆ ನಮ್ಮಂತೆಯೇ ಒಬ್ಬ ಮಾಮೂಲಿ ಹುಡುಗನಾಗಿದ್ದ...!!


- ಅನಿಸಿದ್ದು